ಶುಕ್ರವಾರ, ನವೆಂಬರ್ 9, 2012


ಎಲೆ ಮರೆ ಕಾಯಿ ೬೪ 

ಒಮ್ಮೆ ನಿರ್ದೇಶಕರಿಂದ ಬರಹಗಾರನ ಹುದ್ದೆಗೆ ಕರೆ ಬಂದಿತ್ತು. 
ನಾನು ಸಮಯಕ್ಕೆ ಸರಿಯಾಗಿ ಕರೆದ ಜಾಗಕ್ಕೆ ಹೋಗಿದ್ದೆ.
ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಹೋದ ನನಗೆ 
ಮೊದಲ ಸರಳ ಪ್ರಶ್ನೆ "ನಿಮ್ಮ ಬರವಣೆಗೆ ನಾನು ಕಂಡಿಲ್ಲ, ಏನಾದರೂ ಬರೆದು ತೋರಿಸುತ್ತೀರಾ?" ಅಂತ ಒಂದು ಹಾಳೆ, ಪೆನ್ನು ಮುಂದಿಟ್ಟರು.
ಏನು ತೋಚಲಿಲ್ಲ.
ಕೊನೆಗೆ,
"ಬರವಣೆಗೆ ಒಂದು ಪ್ರಣಯದಂತೆ, ಅದನ್ನ ಅನ್ಯರ ಎದುರು ಮಾಡಲಾಗುವದಿಲ್ಲ" ಅಂತ ಬರೆದು ಎದ್ದು ನಿಂತೆ.

ಆ ಬರಹಗಾರ ಬರೆದ ಕೊನೆಯ ಸಾಲು ಯಾಕೋ ನನ್ನ ಮನದಲ್ಲಿ ಅಚ್ಚಳಿಯದೆ ನಿಂತುಬಿಟ್ಟಿದೆ. ಸೂಪರ್ ಸಾಲು ಅಂತಾರಲ್ಲ ಅಂತಹ ಸಾಲು ಅದು. ನಾನು ಸಂತೆಯ ಮಧ್ಯೆ ಕುಳಿತರೂ ಬರೆಯಬಲ್ಲೆ ಎಂದು ಕೆಲವರು ವಾದ ಮಾಡಬಹುದು. ಒಬ್ಬ ಚಿತ್ರಕಾರ ಖಾಲಿ ಹಾಳೆಯ ಮೇಲೆ ತನ್ನ ಪೆನ್ಸಿಲ್ ನಿಂದಲೋ, ಕುಂಚದಿಂದಲೋ, ಚಿತ್ರ ಮೂಡಿಸಿ ಬಣ್ಣ ತುಂಬುವಾಗ ಅವನ ಕಲೆಯನ್ನು ನೋಡುವ ಕಂಗಳು ಬೆರಗುಗಣ್ಣಿನಿಂದ ತದೇಕ ಚಿತ್ತದಿಂದ ನೋಡಲು ಶುರು ಮಾಡಿದರೂ ತನ್ನ ಧ್ಯಾನಕ್ಕೆ ಧಕ್ಕೆ ಬರದಂತೆ ಅವನು ಚಿತ್ರವೊಂದನು ಬಿಡಿಸಿಬಿಡಬಲ್ಲ. ಆದರೆ ಬರಹಗಾರನಿಗೆ ಸಂತೆಯಲ್ಲಿ ಕುಳಿತರೂ ಒಂದು ಏಕಾಂತ ಬೇಕಾಗುತ್ತೆ. ಪರಕಾಯ ಪ್ರವೇಶ ಅಂತಾರಲ್ಲ ಅಂತಹ ಸ್ಥಿತಿಯನ್ನು ಎಲ್ಲರೂ ಪೂರ್ತಿಯಾಗಿ ತಲುಪದೇ ಇದ್ದರೂ ತಮ್ಮದೇ ಒಂದು ಏಕಾಂತವನ್ನು ಸೃಷ್ಟಿಸಿಕೊಂಡ ಲೇಖಕರು ಅಚ್ಚರಿಗಳನ್ನು ಸೃಷ್ಟಿಸಬಲ್ಲರು. ಆ ಏಕಾಂತ ಎಷ್ಟು ಹೊತ್ತು ಸಿಗುತ್ತೆ, ಎಲ್ಲಿ ಸಿಗುತ್ತೆ, ಹೇಗೆ ಸಿಗುತ್ತೆ, ಅಂತಹ ಏಕಾಂತ ಮತ್ತೆ ಮತ್ತೆ ಸಿಗುತ್ತಾ ಅನ್ನುವುದರ ಮೇಲೆ ಜೊತೆಗೆ ಬರಹಗಾರನ ಆಸಕ್ತಿಯ ಮೇಲೆ ಬರವಣಿಗೆ ಸಹ ಬೆಳೆದು ನಿಲ್ಲುತ್ತೆ. ಪ್ರಣಯವೂ ಹಾಗೆಯೇ ಯಾರೋ ಬಂದು ಬಿಡುವರು ಎನ್ನುವ ಭಯದಿಂದ ಕೂಡಿದ ಪ್ರಣಯಕ್ಕೂ ಆ ಭಯದಿಂದ ಮುಕ್ತವಾದ ಪ್ರಣಯಕ್ಕೂ ತನ್ನದೇ ಆದ ಸಂಭ್ರಮವಿರುತ್ತದೆ. ಹೀಗೆ  ಪ್ರಣಯ ಮತ್ತು ಬರವಣಿಗೆಯನ್ನು ಒಂದನ್ನೊಂದನ್ನು ಹೋಲಿಸಿ ನೋಡಿದರೆ ಕೆಲವರಿಗೆ ತಪ್ಪಾಗಿ ಕಾಣುತ್ತದೇನೋ ಆದರೂ ನಮ್ಮ ಈ ಗೆಳೆಯ ಬರೆದ "ಬರವಣಿಗೆ ಒಂದು ಪ್ರಣಯದಂತೆ, ಅದನ್ನ ಅನ್ಯರ ಎದುರು ಮಾಡಲಾಗುವದಿಲ್ಲ" ಎಂಬುದು ಸತ್ಯ ಎಂದನಿಸುತ್ತದೆ. ಅಂದ ಹಾಗೆ "ಬರವಣಿಗೆ ಒಂದು ಪ್ರಣಯದಂತೆ" ಎಂಬ ಸಾಲು ಕಣ್ಣಿಗೆ ಬಿದ್ದಿದ್ದು "ಮನಸು ಮುಕ್ತ ಮಾತು" ಎಂಬ ಬ್ಲಾಗಿನಲ್ಲಿ.

ಒಂದು ಮಾಯಾಲೋಕದಲ್ಲಿ ಒಂದಷ್ಟು ಹೊತ್ತು ಇದ್ದು ನಂತರ ಎದ್ದು ಹೋಗುವ ಕೋಟ್ಯಾಂತರ ಮನುಷ್ಯರಲ್ಲಿ ನಾವು ಸಹ ಒಬ್ಬರು ಎನ್ನಬಹುದು. ಆ ಮಾಯಾಲೋಕ ಇಂದು ಪ್ರಪಂಚದ ಮೂಲೆ ಮೂಲೆಗೂ ಹರಡಿಕೊಂಡಿದೆ ಎಂದರೆ ಅತಿಶಯೋಕ್ತಿಯಾಗದು. ಆ ಮಾಯಾಲೋಕದಲ್ಲೇ ಕೆಲವರು ತಮಗೆ ಮನಸ್ಸಿಗೆ ಬಂದದ್ದನ್ನು ಬರೆಯುತ್ತಾರೆ ಹಾಗೆ ಬರೆದುದ್ದನ್ನು ತಮ್ಮ ಗೆಳೆಯರೊಡನೆ ಹಂಚಿಕೊಳ್ಳುತ್ತಾರೆ. ತರಾವರಿ ವಿಷಯ ವಸ್ತುಗಳುಳ್ಳ ಕತೆ, ಕವನ, ಲೇಖನ, ಫಿಲಾಸಫಿ ಇತ್ಯಾದಿಗಳ ಕುರಿತು ಈ ಮಾಯಾಲೋಕದಲ್ಲಿ ಬರೆಯುವವರು ಇದ್ದರೂ ಆ ಮಾಯಲೋಕವನ್ನೇ ಕುರಿತು ಬರೆಯುವವರು ಕಡಿಮೆ. ಆ ಮಾಯಾ ಲೋಕ ಯಾವುದು ಎಂದು ತಮಗೆ ತಿಳಿದಿದೆ ಎಂದುಕೊಳ್ಳುವೆ. ಹೌದು ಮಾಯಾಲೋಕವಾದ ಫೇಸ್ ಬುಕ್ ನಲ್ಲಿ ಬರೆಯುವವರು ಜಾಸ್ತಿ. ಆದರೆ ಫೇಸ್ ಬುಕ್ ಕುರಿತು ಬರೆದವರು ಕಮ್ಮಿ. ಫೇಸ್ ಬುಕ್ ಕುರಿತು ಒಂದು ಚಂದದ ಕವನ ಈ ಗೆಳೆಯನ ಬ್ಲಾಗಿನಲ್ಲಿ ಸಿಕ್ಕಾಗ ಯಾಕೋ ಒಂತರಾ ಖುಷಿಯಾಯಿತು.  

ಭೌತಿಕ ಅಸ್ತಿತ್ವ ಇರದ 
ಕೃತಕ ಕುತೂಹಲ ಜನಕ.
ನಮ್ಮ ಖಾಸಗಿ ಬದುಕಿನ 
ಪ್ರಾಯೋಜಕ. 
ನಾವು ಉಸಿರಾಡಿದ ಕ್ಷಣವನ್ನೂ  
ಬಣ್ಣ ಬಡೆಯುವ ತಾಣ    

ಲೈಕು, ಕಾಮ್ಮೆಂಟು 
ಗಳಿಸುವ ಗಂಭೀರ ಸ್ಪರ್ದೆ,
ಇವತ್ತಿನ ಗಳಿಕೆ ಇಷ್ಟು, ನಿನ್ನದೆಷ್ಟು....?
ಎಂಬ ಬಿಸಿನೆಸ್ಸಿನ ಮರ್ಯಾದೆ.

ಹೀಗೆ ಚಂದದ ಸಾಲುಗಳನ್ನು ಬರೆಯುತ್ತಲೇ ಸಾಹಿತ್ಯ ಕೃಷಿಯನ್ನು ತನ್ನದೇ ಶೈಲಿಯಲ್ಲಿ ಮಾಡುತ್ತಿರುವ ಗೆಳೆಯ ವಿಜಯ್ ಕುಮಾರ್ ಹೂಗಾರ್ ಅವರು ಎಲೆ ಮರೆ ಕಾಯಿಗಳ ಜೊತೆ ಮಾತುಕತೆಯ ಇಂದಿನ ಅತಿಥಿ.. ಕತೆ ಕವನಗಳ ಜೊತೆಗೆ ಪುಟ್ಟ ಪುಟ್ಟ ಚುಟುಕಗಳ ಮೇಲೂ ಹೆಚ್ಚು ಒಲವುಳ್ಳ ಗೆಳೆಯನ ಪರಿಚಯವನ್ನು ಓದುವ ಮೊದಲು ಈ ಕೆಳಗೆ ನೀಡಿರುವ ಅವರ ಕವನವೊಂದರ ಸಾಲುಗಳನ್ನು ಓದಿಕೊಂಡು ಅವರ ಪರಿಚಯವನ್ನು ಓದಿಕೊಳ್ಳಿ.. :))

ಕಾರಣ ಇಲ್ಲದ ಪ್ರೀತಿ,
ಅದು ನನ್ನ ಗುರುತಿನ ಚೀಟಿ.... 
ಈ ನನ್ನ ನೆಮ್ಮದಿ ಕಂಡು,
ಆ ಚಂದಿರ ಹೊಡೆಯಲಿ ಸೀಟಿ.....:-) 

ವಿಜಯಕುಮಾರ್ ಹೂಗಾರ್

"ಪ್ರಿಯ ನಟರಾಜು ಅವರೇ, ಪರಿಚಯ ನೀಡುವಷ್ಟು ಬರಹಗಾರನೆನಲ್ಲ. ದಯವಿಟ್ಟು ನನ್ನ ಪರಿಚಯ ಒಬ್ಬ ಬರಹಗಾರನಾಗಿ ಸ್ವೀಕರಿಸದೆ,ಗೆಳೆಯನಾಗಿ ಸ್ವೀಕರಿಸಿ. ಬೀದರ್ ಜಿಲ್ಲೆಯ ಬಸವ ಕಲ್ಯಾಣ್ ತಾಲೂಕಿನ ಬಟಗೇರಾ ಗ್ರಾಮದಲ್ಲಿ ನನ್ನ ಬೇರು. ತಂದೆ ಪ್ರಾಥಮಿಕ ಶಾಲಾ ಶಿಕ್ಷಕರಾದ್ದರಿಂದ ಊರಿಂದೂರಿಗೆ ಸುತ್ತಿ, ಏಳೂರು ನೀರು ಕುಡಿದು ಸದ್ಯಕ್ಕೆ ಗುಲ್ಬರ್ಗದಲ್ಲಿ ಮನೆ :-) ಪ್ರತಿ ಊರಿನಲ್ಲೋ ಒಂದೊಂದು ನೆನಪಿನ ಗಂಟು ಕಟ್ಟಿ ಮುಂದಿನೂರಿಗೆ ಸಾಗೋದು ನನ್ ಕೆಲಸ. ಬೀದಿಯಲ್ಲಿ ಹರಿದ ಭಿತ್ತಿ ಚಿತ್ರಗಳಂತೆ ಬಣ್ಣ ಕಳೆದುಕೊಂಡ ಬದುಕಿಗೆ, ಬಣ್ಣ ಹಚ್ಚೋದು ಕಲಿಸಿ, ಕೆಲಸ ಕೊಡಿಸಿದ್ದು ಬೆಂಗಳೂರು. ಊರಿಗೂ ಒಂದು ಜೀವ ಇರತ್ತೆ ಅಂತ ಕಂಡಿದ್ದು ಬಹುಶ ಇದೆ ಬೆಂಗಳೂರಲ್ಲಿ.ಇಲ್ಲಿ ಉಸಿರಾಡೋದೇ ಒಂದು ಖುಷಿ. ಬೆಂಗಳೂರಿನಲ್ಲಿ ತುಂಬಾ ಇಷ್ಟಾನೂಇಷ್ಟಗಳಲ್ಲಿ ವರನಟ ಡಾ. ರಾಜಕುಮಾರ್ ಪ್ರತಿಮೆಗಳು, ಕಟೌಟ್ ಗಳನ್ನ ಆಸೆಯಿಂದ ನೋಡೋದು, ಮೆಜೆಸ್ಟಿಕ್ ತಲೆಯಮೇಲೆ ನಿಂತು ಅಜ್ಞಾತ ಹೆಜ್ಜೆಗಳು ನೋಡೋದು, ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ. ಕೆಲಸ ಸೇರಿದ ಮೊದಲ ದಿನದಿಂದಲೂ ಕೆಲಸದಲ್ಲಿ ಖುಷಿ ಹುಡುಕಲು ಯತ್ನಿಸುತ್ತಿದ್ದೇನೆ.

ಸಮಯ ಸಿಕ್ಕಾಗ ಕನ್ನಡ ಸಾಹಿತ್ಯ ಓದೋದು.ತಲೆ ಕೆಟ್ಟಾಗ ಏನಾದ್ರು ಬರೆಯೋದು :-) ಬರವಣಿಗೆಗೆ ನಾನು ತುಂಬಾ ಹೊಸಬ. ಸುಮಾರು ಒಂದು ವರ್ಷದ ಹಿಂದೆ ಬರೆಯುವದಕ್ಕೆ ಶುರು ಮಾಡಿರಬಹುದು. ಎಡೆಬಿಡದೆ ತುಂಬಾ ಕಾಡುವ ವಿಷಯಗಳನ್ನ, ಸಂಗತಿಗಳನ್ನ ಬರವಣಿಗೆಯಿಂದ ತಣಿಸಿಕೊಳ್ಳುತ್ತೇನೆ. ನನ್ನ ಮುಂದಿನ ಎಲ್ಲಾ ಕೆಲಸಗಳು ಸ್ಥಗಿತವಾಗುವಷ್ಟು ಕಾಡಿದಾಗ ಮಾತ್ರ ಪೆನ್ನು ಕೈಗೆ ಹಿಡಿಯುತ್ತೇನೆ. ಸೋತು ಹಣ್ಣಾಗಿ ಬೇಜಾರಾಗಿ ಕುಳಿತಿರುವಾಗ ಒಮ್ಮೆ ಗೆಳೆಯರ ಬಲವಂತದಿಂದ ಹೊಗೆನಕಲ ಫಾಲ್ಸ್ ಗೆ ಹೋಗಿದ್ದೆ. ಅಲ್ಲಾದ ನನ್ನ ಮನಸಿನ ಬದಲಾವಣೆ, ನೋವಿಗೆ ಮುಕ್ತಿ ಸಿಕ್ಕ ರೀತಿಯ ಬಗ್ಗೆ ಒಂದು ಪ್ರವಾಸ ಕಥನದ ತರಹ ಬರೆದಿದ್ದು ನನ್ನ ಮೊದಲ ಬರಹ. ಅಲ್ಲಿಂದ ಒಂದೆರೆಡು ಕಥೆಯನ್ನ ಬರೆಯುವದಕ್ಕೆ ಆರಂಭಿಸಿದೆ. ಕೆಲಸದ ಒತ್ತಡದಲ್ಲಿ ಕಥೆ ಬರೆಯುವದಕ್ಕೆ ಸಮಯ ಕೊಡುವದು ಕಷ್ಟವಾಗುತ್ತ ಬಂತು, ಅದಕ್ಕೆ ಶಾರ್ಟ್ ಆಗಿ ಕವನ ಬರೆಯುವದಕ್ಕೆ ಶುರುಮಾಡಿದೆ.

ಜಗತ್ತಿನ ಶ್ರೇಷ್ಠ ಸಿನಿಮಾ ಓದೋದು,ನೋಡೋದು ಇಷ್ಟ. ಪುಟ್ಟಣ್ಣ ಕಣಗಾಲ್, ಕ್ರಿಸ್ಟೋಫರ್ ನೋಲನ್, ಅಕಿರಾ ಕುರಸವ ನೆಚ್ಚಿನ ನಿರ್ದೇಶಕರು. ಜಯಂತ್ ಕಾಯ್ಕಿಣಿ ನನ್ನ ನೆಚ್ಚಿನ ಲೇಖಕ. ಅವರ ಕಥಾಸಂಕಲನಗಳು ನನಗೆ ಗುರು ಸಮಾನ. ಅವರ ಕಥೆಗಳು ಸ್ಪಷ್ಟವಾಗಿ ಕಲ್ಪಿಸುವಷ್ಟು ನನ್ನನ್ನು ಆವರಿಸುತ್ತವೆ. ಅಲ್ಲಿನ ಪಾತ್ರಗಳು ಯಾವುದೋ ಒಂದು ಲೋಕಕ್ಕೆ ಕರೆದೊಯ್ದು ವಾಪಸ್ಸು ಬರುವ ದಾರಿ ಹೇಳದೆ ಮಾಯವಾಗುವಷ್ಟು ಕಾಡುತ್ತವೆ. ಇಲ್ಲಿಯವರೆಗೂ ನನಗೆ ತುಂಬಾ ಕೇಳಲ್ಪಟ್ಟಿರುವ ಪ್ರಶ್ನೆಯೆಂದರೆ 'tell about youself?'. ಎಲ್ಲಾ ಇಂಟರ್ವ್ಯೂ ಅಲ್ಲೂ ಇದು ಕಾಮನ್ ಪ್ರಶ್ನೆ. ಪ್ರತಿಸಲ ಮುಖ ಕೆಡಿಸಿಕೊಂಡೆ ಉತ್ತರಿಸಿದ ನನಗೆ ಇಂದು ಮೊದಲ ಬಾರಿಗೆ ನನ್ನ ಬಗ್ಗೆ ಹೇಳುವದಕ್ಕೆ ಖುಷಿಯಾಗುತ್ತಿದೆ.
ನನ್ನ ಬಗ್ಗೆ ನನಗೇ ಪರಿಚಯಿಸಿದ್ದಕ್ಕೆ ತುಂಬಾ ಧನ್ಯವಾದಗಳು.ನಿಮ್ಮ ಈ 'ಪ್ರಶ್ನೆ'ಗೆ ನಾನು ಚಿರ ಋಣಿ.

ಒಲುಮೆಯಿಂದ
ವಿಜಯಕುಮಾರ್ ಹೂಗಾರ್."

ಎಂದು ಮಾತು ಮುಗಿಸಿದ ಗೆಳೆಯ ವಿಜಯ್ ಬರೀ ಒಂದು ವರ್ಷದಿಂದ ತಮ್ಮ ಬರವಣಿಗೆಯನ್ನು ಶುರು ಮಾಡಿದ್ದಾರೆ ಎಂದರೆ ನಂಬಲಾಗದು. ಯಾಕೆಂದರೆ ಅವರ ಬರಹಗಳಲ್ಲಿರುವ ಪ್ರಬುದ್ಧತೆ ಎದ್ದು ಕಾಣುತ್ತೆ. ಅಂದ ಹಾಗೆ ಗೆಳೆಯ ವಿಜಯ್ ಅವರ ಬ್ಲಾಗಿನ ಲಿಂಕ್ ಈ ಕೆಳಗೆ ನೀಡಿರುವೆ. ಸಮಯವಿದ್ದಾಗ ಒಮ್ಮೆ ಕಣ್ಣಾಡಿಸಿ..
http://mukta-viji.blogspot.in/

ವಿಜಯ್ ಅವರ ಒಂದೆರಡು ಕವನಗಳ ಸಾಲುಗಳು ಇಗೋ ನಿಮಗಾಗಿ ಗೆಳೆಯರೇ..

ನೀ ಮುಟ್ಟಿ 
ಹೋದ ನೆಲಕ್ಕಿಂದು 
ಬಿಗುಮಾನ.
ಸೋಕಿದ ಮನಕ್ಕೆಲ್ಲ 
ಬಹುಮಾನ.
ನೆರಳು ತಾಗಿದ 
ಜಾಗಕ್ಕೆಲ್ಲ ಹೊಸ 
ಜೀವದಾನ.
*****
ಮಾನ್ಯ ಚಂದಿರನಿಗೊಂದು
ವಿನಮ್ರ ಮನವಿ

ನನ್ನಾಕೆಯ ಹಿಂಬಾಲಿಸಬೇಡ,
ಅವಳ ಏಕಾಂತ ಕದಿಯಲು
ಯತ್ನಿಸಬೇಡ,
ಹೀಗೊಮ್ಮೆ ಯತ್ನಿಸಿ 
ನನ್ನ ಏಕಾಂತ 
ಕಳೆದು ಕೊಂಡಿರುವೆ,
ವ್ಯರ್ಥ ಪ್ರಯತ್ನಕ್ಕೆ ಬಲಿಯಾಗಬೇಡ
ಸೂರ್ಯನ ಆಸ್ಥಾನಕ್ಕೆ ಕವಿಯಾಗಬೇಡ.
*****

ಮತ್ತೆ ಸಿಗೋಣ
ನಿಮ್ಮ ಪ್ರೀತಿಯ
ನಟರಾಜು :))

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ